ವಿದ್ಯುನ್ಮಾನ ಬ್ಯಾಂಕಿಂಗ್  
	ವಿದ್ಯುನ್ಯಾನ ಬ್ಯಾಂಕಿಂಗ್ ಎನ್ನುವುದು ಇಂಗ್ಲೀಷಿನ `ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಎನ್ನುವುದರ ಸಮಾನಾರ್ಥಕ ಪದವಾಗಿದೆ. ಇಂದಿನ ಕಂಪ್ಯೂಟರ್ ಯುಗದಲ್ಲಿ ಹಾಗು ಎಲೆಕ್ಟ್ರಾನಿಕ್ ತಾಂತ್ರಿಕ ಕೌಶಲ್ಯತೆ ಅದ್ಭುತವಾಗಿ ವಿಕಾಸವಾಗಿರುವ ಈ ಕಾಲದಲ್ಲಿ ಸಾಂಪ್ರದಾಯಿಕ ವ್ಯವಸ್ಥೆಯಲ್ಲದ ಎಲ್ಲ ತಾಂತ್ರಿಕ ಬ್ಯಾಂಕಿಂಗ್‍ನಲ್ಲೂ ವಿದ್ಯುನ್ಮಾನ ಬ್ಯಾಂಕಿಂಗ್ ಸಾಮಾನ್ಯವೆನ್ನುವಷ್ಟರಮಟ್ಟಿಗೆ ಹಾಸುಹೊಕ್ಕಿದೆ. ಯಾವುದೇ ವ್ಯಾಪಾರೀ ವೃತ್ತಿಯ ರಸ್ತೆ ಬದಿಯ ವ್ಯಾಪಾರಿಯಿಂದ ಹಿಡಿದು ಬೃಹತ್ ಉದ್ಯಮದವರೆಗೆ ವಿದ್ಯುನ್ಮಾನ ತಾಂತ್ರಿಕತೆಯು ತನ್ನ ವ್ಯಾಪ್ತಿಯನ್ನು ಹೊಂದಿದೆ.  ಹೋಟೆಲ್ಲಿನ ಬಿಲ್ ಪಾವತಿ, ಬಸ್ಸಿನಲ್ಲಿ ಚೀಟಿ (ಟಿಕೇಟು) ನೀಡುವುದು, ವಿದ್ಯುತ್ ಹಾಗು ಜಲಕರ ಪಾವತಿಗಳಲ್ಲಿ, ಅಂಗಡಿಗಳಲ್ಲಿ, ಸಂಕೀರ್ಣ ವ್ಯಾಪಾರ ಮಳಿಗೆಗಳಲ್ಲಿ, ಕಛೇರಿಗಳಲ್ಲಿ, ಬ್ಯಾಂಕುಗಳಲ್ಲಿ, ಕಂಪನಿಗಳಲ್ಲಿ ಎಲ್ಲ ಕಡೆಯು ವಿದ್ಯುನ್ಮಾನ ತಾಂತ್ರಿಕತೆಯು ಹರಡಿ ಕೆಲಸ-ಕಾರ್ಯಗಳು ಸುಲಭವೂ, ಸಮರ್ಪಕವೂ, ತಪ್ಪಿಲ್ಲದವೂ ಆಗಿವೆ. ಈ ವಿದ್ಯುನ್ಮಾನ ತಾಂತ್ರಿಕತೆಯನ್ನು ಸಮರ್ಪಕವಾಗಿ ಉಪಯೋಗಿಸಿ ಕೊಳ್ಳುವ ನಿಟ್ಟಿನಲ್ಲಿ ಸಫಲ ಹೆಜ್ಜೆ ಹಾಕುತ್ತಿರುವ ಬ್ಯಾಂಕಿಂಗ್ ಕ್ಷೇತ್ರವೂ ತನ್ನ ಎಲ್ಲ ಗ್ರಾಹಕ ಸಂಪರ್ಕದ ಕೆಲಸ-ಕಾರ್ಯಗಳಲ್ಲಿ ಮತ್ತು ತನ್ನ ಹಿಂಬದಿಯ ಕಾರ್ಯ ಚಟುವಟಿಕೆಗಳಲ್ಲಿ ವಿದ್ಯುನ್ಮಾನವನ್ನು ಯಶಸ್ವಿಯಾಗಿ ಉಪಯೋಗಿಸಿಕೊಂಡು ಗ್ರಾಹಕರಿಗೆ ತೃಪ್ತಿಕರ ಸೇವೆಯನ್ನು ನೀಡುತ್ತಿವೆ.

	ಈ ಕೆಳಗಿನ ಚಟುವಟಿಕೆಗಳನ್ನು ಬ್ಯಾಂಕಿಂಗ್ ನಡೆಸುತ್ತಿದ್ದರೆ ಅದು ವಿದ್ಯುನ್ಮಾನ ಬ್ಯಾಂಕಿಂಗ್ ನಡೆಸುತ್ತಿದೆ ಎಂದು ಹೇಳಬಹುದು. 

ದೂರವಾಣಿ ಬ್ಯಾಂಕಿಂಗ್ 
ಸಣ್ಣ ಪ್ರಮಾಣದಲ್ಲಿ ಗ್ರಾಹಕರಿಗೆ ಅಂತರಜಾಲ ಬ್ಯಾಂಕಿಂಗ್ ಬೃಹತ್ ಪ್ರಮಾಣದಲ್ಲಿ ಉದ್ಯಮಿಗಳಿಗೆ ಅಂತರಜಾಲ ಬ್ಯಾಂಕಿಂಗ್. 
ಗ್ರಾಹಕರಿಗೆ ಅಂತರಜಾಲ ಸೌಲಭ್ಯ ನೀಡುವಿಕೆ (ಗೃಹ-ಬ್ಯಾಂಕಿಂಗ್ ಮೋಡಮ್ ಸಹಿತ)
ವಿದ್ಯುನ್ಮಾನ ಹಣ ರವಾನೆ.
ಸ್ವಯಂಚಲೀ ಟೆಲ್ಲರ್ ಯಂತ್ರ
ಗ್ರಾಹಕರ ಖಾತೆಗಳ ಏಕೀಕರಣ ಅರ್ಥಾತ್ ಒಂದೆಡೆ ತರುವ ಯತ್ನ. 
ವಿದ್ಯುನ್ಮಾನ ತೀರುವೆ ಮೂಲಕ ಪಾವತಿಗಳು
ಶುಲ್ಕಾಧಾರಿತ ವಿದ್ಯುನ್ಮಾನ ಸೇವೆಗಳು.
ಟ್ರಸ್ಟ್ ಸೇವೆಗಳು ಮತ್ತು ವಿಮಾ ಸಂಬಂಧಿತ ಸೇವೆಗಳು.
ಇತರ ಸೇವೆಗಳು (ಮಾರುಕಟ್ಟೆಯ ಮಾಹಿತಿ ಸೇವೆ, ಹಣಕಾಸು ಸೇವೆಗಳು, ಹೂಡಿಕೆ ಸಲಹೆಗಳು, ವೆಬ್‍ಗಳ ಮಾಹಿತಿ ಮೊದಲಾದವುಗಳು) 

ವಿದ್ಯುನ್ಮಾನ ಬ್ಯಾಂಕಿಂಗ್‍ನ ಸೌಲಭ್ಯಗಳನ್ನು ಉಪಯೋಗಿಸುತ್ತಿರುವ ಗ್ರಾಹಕರ ಅಂದಾಜು ಸಂಖ್ಯೆ ಮತ್ತು ಅದರ ವಹಿವಾಟಿನ ಪರಿಮಾಣ, ಒಟ್ಟಾರೆ ಇರುವ ಗ್ರಾಹಕರು ಮತ್ತು ವಹಿವಾಟಿನೊಡಗಿನ ಶೇಕಡಾವಾರು ತುಲನಾತ್ಮಕ ಅಧ್ಯಯನ, ಈ ವಹಿವಾಟಿನಿಂದಾದ ಲಾಭ, ನಷ್ಟಗಳು, ಖರ್ಚಿನ ಬಾಬ್ತುಗಳನ್ನು ಪರಿಶೀಲಿಸಿ ಇದರಿಂದ ಬ್ಯಾಂಕಿಗೆ ಒಟ್ಟಾರೆ ಎಷ್ಟು ಅನುಕೂಲ-ಲಾಭಗಳಾಗಿವೆ ಎಂಬುದು ಅಧ್ಯಯಿನಿಸುವುದ ಭವಿಷ್ಯದ ಯೋಜನೆಗಳಿಗೆ ಅತ್ಯಮೂಲ್ಯವಾಗಿದೆ.

ಬ್ಯಾಂಕು ಈ ಸೌಲಭ್ಯವನ್ನು ತಾನೇ ಸ್ವತಂತ್ರವಾಗಿ ನಿರ್ವಹಿಸುತ್ತಿದೆಯೇ ಅಥವಾ ಹೊರಗಡೆಯ ಸಂಸ್ಥೆಗೆ ಕೊಟ್ಟಿದೆಯೇ ಎಂಬುದರ ಮೇಲೆ ಅದರ ಭದ್ರತಾ ಕ್ರಮಗಳು, ಕರಾರು-ಒಡಂಬಡಿಕೆಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ. ಬ್ಯಾಂಕಿನ ಆಂತರಿಕ ಜಾಲತಾಣ , ವಿದ್ಯುನ್ಮಾನ ಬ್ಯಾಂಕಿಂಗ್‍ಗೆ ಬೇಕಾದ ಸಾರ್ವಜನಿಕ ವೆಬ್ ಸ್ಥಳಗಳು ನಿರ್ವಹಿಸುವುದರ ರೀತಿ-ನೀತಿಗಳು, ವ್ಯವಸ್ಥೆಗಳನ್ನು ಆಗಾಗ್ಗೆ ಪರಿಶೀಲಿಸುವುದು, ಜೊತೆಗೆ ನಿಷ್ಣಾತರಿಂದ ಪರಿವೀಕ್ಷಣೆಮಾಡಿಸುವುದು ಉತ್ತಮ.

ಈ ವಿದ್ಯುನ್ಮಾನ ಬ್ಯಾಂಕಿಂಗ್‍ನಲ್ಲಿ ಸಾಕಷ್ಟು ಅಪಾಯ, ನಷ್ಟ ಸಂಭವಗಳಿರುವುದರಿಂದ ಅವುಗಳ ನಿವಾರಣೆಗೆ ಬ್ಯಾಂಕಿನ ಕ್ರಮಗಳ ಬಗ್ಗೆ ಕೂಲಂಕುಷವಾಗಿ ಪರಿಸೀಲನೆಯು ಬಹು ಅಗತ್ಯವಾದುದು. ಅವುಗಳೇನೆಂದರೆ 

ಈ ವಿದ್ಯುನ್ಮಾನ ಚಟುವಟಿಕೆಗಳಿಗೆ ಅಗತ್ಯವಾದ ಕಾರ್ಯನೀತಿ, ರೀತಿ-ರಿವಾಜಿನ ಸೂಚನೆಗಳು.
ಆಂತರಿಕ ನಿಯಂತ್ರಣ ಹಾಗು ಭದ್ರತಾ ಅಂಶಗಳು.
ಇದರ ಸಂಪೂರ್ಣ ಪರಿಶೋಧನಾ ವ್ಯವಸ್ಥೆಯ ಸ್ಥಾಪನೆ.
ಇವೆಲ್ಲವುಗಳ ನಿರ್ವಹಣೆಯು ಹೊರಗಡೆಯ ಸಂಸ್ಥೆಗೆ ಕೊಟ್ಟಿದ್ದರೆ ಅದರ ನಿಯಂತ್ರಣ, ಮೇಲ್ವಿಚಾರಣೆ, ಸಂಪರ್ಕ ಮುಂದಾದವುಗಳ ಜವಾಬ್ದಾರಿ.
ಆಡಳಿತ ಮಂಡಳಿಯ ಕರ್ತವ್ಯ ನಿರ್ವಹಣಾ ನಿಯಮಾವಳಿಗಳು.
ಇದರ ಆಡಳಿತಾತ್ಮಕ ವೆಚ್ಚದ ಹಾಗು ವರಮಾನದ ಪರಿಶೀಲನೆ ಹಾಗು ನಿರ್ವಹಣೆ.
ಇವೆಲ್ಲವದುಗಳಲ್ಲಿ ಕಂಡು ಬರಬಹುದಾದ ಲೋಪ-ದೋಷ, ನ್ಯೂನತೆಗಳ ಬಗ್ಗೆ ಮಾಡಿಕೊಂಡಿರುವ ಪರಿಹಾರ ದಾರಿಗಳು ಮತ್ತು ಸಿದ್ಧತೆಗಳು.

ತಾಂತ್ರಿಕತೆಯಲ್ಲಿನ ವಿಕಾಸದ ಪೂರ್ಣೋಪಯೋಜನೆಗೆ ಬೇಕಾದ ಆಧುನೀಕರಣ, ನವೀಕರಣ ಅಥವಾ ಪರಿಷ್ಕರಣಗಳಿಗೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ನಿರ್ಧಾರಗಳು, ಯೋಜನೆಗಳು.
ಹೀಗೆ ಇತ್ತ ತಾಂತ್ರಿಕತೆಯಲ್ಲಿನ ಬೆಳವಣಿಗೆಯ ಸದುಪಯೋಗ, ಗ್ರಾಹಕ ಬೇಡಿಕೆಗೆ ಸ್ಪಂದಿಸುತ್ತ ಮಾಡುತ್ತಿರಬೇಕಾದ ಅಲ್ಪಸ್ವಲ್ಪ ಬದಲಾವಣೆಗಳು ಇತ್ತ ವ್ಯವಸ್ಥೆಯು ಲೋಪ-ದೋಷ ರಹಿತವಾಗಿ ಸರಿಯಾಗಿ ನಡೆದುಕೊಂಡು ಹೋಗಲು ಬೇಕಾದ ಎಲ್ಲ ಸಿದ್ಧತೆಗಳನ್ನು ಬ್ಯಾಂಕು ಮಾಡಿಕೊಂಡಿರಬೇಕು.  ವಿದ್ಯುನ್ಮಾನ ಬ್ಯಾಂಕಿಂಗ್‍ನಿಂದ ಗ್ರಾಹಕರಿಗೆ ಹಾಗು ಬ್ಯಾಂಕ್‍ಗಳಿಗೆ ಬಹಳ ಅನುಕೂಲಗಳುಂಟು. ಇಂದಿನ ಆಧುನಿಕ ತಾಂತ್ರಿಕ ವಿಕಾಸದ ಸಂಪೂರ್ಣ ಪ್ರಯೋಜನ ಪಡೆಯುವ ದಿಶೆಯಲ್ಲಿ ಇದು ಬಹಳ ಉಪಯುಕ್ತವಾದುದು. ಆದರೆ ಸಾಂಪ್ರದಾಯಿಕ ಬ್ಯಾಂಕಿಂಗ್‍ನಲ್ಲಿನ ಗ್ರಾಹಕ ಹಾಗು ಬ್ಯಾಂಕಿನ ಸಿಬ್ಬಂದಿ/ಅಧಿಕಾರಿಗಳೊಡನಿದ್ದ ವೈಯಕ್ತಿಕ ಸ್ನೇಹ-ಸಂಬಂಧಗಳು ಇದರಲ್ಲಿ ಇಲ್ಲವಾಗಿ ಪರಸ್ಪರ ಭೇಟಿಯ ಅವಶ್ಯಕತೆಯೇ ಇಲ್ಲದೆ ಇರುತ್ತದೆಂಬುದೊಂದೇ ಲೋಪವೆನ್ನುವವರಿದ್ದಾರೆ.
(ಜಿ.ಆರ್.ವಿ; ವೈ.ಕೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ